ನೆಮಟೋಡ -
ಪ್ರಾಣಿಗಳ ಇಲ್ಲವೆ ಸಸ್ಯಗಳ ಪರಾವಲಂಬಿಗಳಾಗಿಯೊ ನೀರಿನಲ್ಲಿ ಇಲ್ಲವೆ ಮಣ್ಣಿನಲ್ಲಿ ಸ್ವತಂತ್ರಜೀವಿಗಳಾಗಿಯೋ ಜೀವಿಸುವ ಹುಳುಗಳನ್ನು ಒಳಗೊಂಡಿರುವ ವರ್ಗ. ಆಸ್ಕೆಲ್ಮಿಂತೀಸ್ ವಿಭಾಗಕ್ಕೆ ಸೇರಿದೆ. ದುಂಡುಹುಳುಗಳು, ಈಲ್‍ಹುಳುಗಳು, ಕೊಕ್ಕೆಹುಳುಗಳು, ಗಿನಿ ಹುಳುಗಳು ಮುಂತಾದವು ಇದರ ಉದಾಹರಣೆಗಳು.

	ಜೀವಿಸಲು ಸಾಧ್ಯವುಳ್ಳ ಎಲ್ಲೆಡೆಗಳಲ್ಲೂ ಇವನ್ನು ಕಾಣಬಹುದು. ಇವು ಹುಳುವಿನಂತಿರುವ ಜೀವಿಗಳಲ್ಲಿ ಅತ್ಯಂತ ಯಶಸ್ವೀ ಜೀವಿಗಳು. ಪ್ರಭೇದಗಳಲ್ಲಿ ಮತ್ತು ಸಂಖ್ಯೆಯಲ್ಲಿಯೂ ಕೂಡ ಈ ಮಾತು ನಿಜ. ಈ ಗುಂಪಿನ ಬಹುಪಾಲು ಹುಳುಗಳು ದನಕರುಗಳ, ಸಸ್ಯಗಳ ಮತ್ತು ಮನುಷ್ಯನ ಪರಾವಲಂಬಿಗಳಾಗಿ ಜೀವಿಸುತ್ತಿದ್ದು ವ್ಯವಸಾಯ ಪದಾರ್ಥಗಳನ್ನು ಹಾಳುಮಾಡುವುದರಲ್ಲಿ ಸಂಧಿಪದಿಗಳಿಗೆ ಸಮ ಎನಿಸಿಕೊಂಡಿದೆ.

	ಈ ಜೀವಿಗಳ ದೇಹರಚನೆ ತುಂಬ ವೈವಿಧ್ಯಮಯ. ಇದರಿಂದಾಗಿ ಅವುಗಳ ಸಾಮಾನ್ಯ ಗುಣಲಕ್ಷಣಗಳನ್ನು ಪಟ್ಟಿ ಮಾಡುವುದು ಕಷ್ಟದ ಕೆಲಸ. ಒಂದು ಮಾದರಿ ದುಂಡುಹುಳುವಿನಲ್ಲಿ ನೀಳವಾದ ಆದರೆ ಖಂಡಗಳಾಗಿ ವಿಭಾಗವಾಗಿಲ್ಲದ ದೇಹ ಉಂಟು. ದೇಹದ ಮೇಲೆ ಕ್ಯೂಟಿಕಲ್ ಎಂಬ ಹೊರಹೊದಿಕೆಯಿದೆ. ಇದರ ಕೆಳಗೆ ಎಪಿಡರ್ಮಿಸ್ ಪದರ ಉಂಟು. ಸಂವೇದನಾಶೀಲವಾದ ಅಥವಾ ಅಲ್ಲದ ಬಿರುಗೂದಲುಗಳಿರಬಹುದು. ಭ್ರೂಣ ಮೊಟ್ಟೆಯೊಳಗಿರುವಾಗ ಒಂದು ಅಥವಾ ಎರಡು ಸಲ ಹಾಗೂ ಪ್ರೌಢಜೀವಿಯಾಗುವ ಕಾಲದಲ್ಲಿ ನಾಲ್ಕು ಸಲ ಪೊರೆಬಿಡುವುದು. ಎಪಿಡರ್ಮಿಸಿನ ಜೀವಕಣಗಳ ಒಂದುಗೂಡುವಿಕೆಯಿಂದ ಒಂದು ಕೊಳವೆಯ ಆಕಾರದ ರಚನೆ ರೂಪುಗೊಳ್ಳುವುದು. ಎಪಿಡರ್ಮಿಸಿನ ಜೀವಕಣಗಳು ವ್ಯಕ್ತವಾಗಿ ಕಾಣಬಹುದು ಅಥವಾ ಅದು ಕಣಾವರಣವಿಲ್ಲದ ಪದರವಾಗಿರಬಹುದು.

	ಶುದ್ಧೀಕರಣ ವಿಧಾನ: ಮಲದ್ರವ ಅಧೋದಿಬ್ಬದಲ್ಲಿ ಉತ್ಪತ್ತಿಯಾಗಿ ಮುಂದುವರಿದು ದೇಹದ ಮುಂದಿನ ತುದಿಯ ಸ್ವಲ್ಪ ಹಿಂದೆ ಅಧೋಭಾಗದಲ್ಲಿ ಒಂದು ದ್ವಾರದ ಮೂಲಕ ಹೊರಬೀಳುವುದು. ಶುದ್ಧೀಕರಣ ನಾಳಗಳಿದ್ದರೆ ಪಕ್ಕದ ದಿಬ್ಬಗಳಲ್ಲಿ ಮಾತ್ರ ಇರುವುವು.

	ಹೊರದರ್ಮದ ಕೆಳಗಿರುವ ಸ್ನಾಯುತಂತುಗಳು ದೇಹದೊಳಗಿರುವ ದೇಹಾಂತರ ಅವಕಾಶವನ್ನು ಆವರಿಸಿರುತ್ತದೆ. ಇವು ನೀಳವರ್ತುಲ ಚತುರ್ಥಾಂಶಗಳಲ್ಲಿ ನಾಲ್ಕು ಗುಂಪುಗಳಾಗಿ ಅಳವಡಿಕೆಯಾಗಿವೆ. ಕದುರಿನಾಕಾರದ ಈ ಸ್ನಾಯುತಂತುಗಳಲ್ಲಿ ಎರಡು ಭಾಗಗಳಿವೆ. ಕಣಭಿತ್ತಿಯಿರುವ ಭಾಗ ಬೊಬ್ಬಿಯಂತೆ ಉಬ್ಬಿ ದೇಹಾಂತರಾವಕಾಶದ ಕಡೆ ಇದೆ. ಮತ್ತೊಂದು ಭಾಗ ಸಂಕುಚಿಸುವ ಸಾಮಥ್ರ್ಯವುಳ್ಳದ್ದು ಮತ್ತು ಹೊರದರ್ಮದ ಒಳಭಾಗದ ಕಡೆಗಿರುವುದು. ಪ್ರತಿಯೊಂದು ಸ್ನಾಯುಕಣದ ಬಿಡಿತುದಿಯಲ್ಲಿಯೂ ಒಂದು ನರತಂತು ಉಂಟು. ಇದು ಊಧ್ರ್ವ ದಿಬ್ಬದ ಅಥವಾ ಅಧೋದಿಬ್ಬದಲ್ಲಿರುವ ನರಹುರಿಗೆ ಸಂಬಂಧ ಕಲ್ಪಿಸುವುದು.

	ದೇಹಾಂತರವಕಾಶ ಜೀವಕಣಗಳ ಮಧ್ಯೆ ಸೀಳಿಕೆಯಿಂದಾದುಲ್ಲ. ಆದ್ದರಿಂದ ಇದು ಸೀಲೋಮ್ ಅಲ್ಲ, ಬರಿಯ ಮಿಥ್ಯಾವಕಾಶ (ಸೂಡೋಸೀಲ್) ಎಂದು ಕರೆಯಬಹುದು. ಜೀರ್ಣನಾಳ ದೇಹದ ಉದ್ದಕ್ಕೂ ನೆಟ್ಟನೆಯ ಕೊಳವೆಯಂತೆ ಚಾಚಿಕೊಂಡಿದೆ. ಇದರ ಮುಂದಿನ ತುದಿಯಲ್ಲಿ ಬಾಯಿ ಉಂಟು. ಆಸನದ್ವಾರ ಮಲಕೂಪದಿಂದ ಹಿಂದಿನ ತುದಿಯ ಹತ್ತಿರದಲ್ಲಿ ಅಧೋಭಾಗದಲ್ಲಿ ಹೊರಗೆ ತೆಗೆಯುವುದು. ಬಾಯಿಯ ಸುತ್ತ ತುಟಿಗಳೂ ಮತ್ತು ಇಂದ್ರಿಯ ಕೋಶಗಳೂ ಇವೆ. ಬಾಯಿ ಪ್ರದೇಶ ಮೊಟಕಾದ ಕೊಳವೆ. ಇದು ಅನ್ನನಾಳವನ್ನು ಸೇರುತ್ತದೆ. ಪ್ರಾಣಿಗಳ ಮತ್ತು ಸಸ್ಯಗಳ ಪರೋಪಜೀವಿಗಳಾಗಿ ಬದುಕುವ ದುಂಡುಹುಳುಗಳಲ್ಲಿ ಬಾಯಲ್ಲಿ ಸೂಕ್ಷ್ಮವಾದ ಮತ್ತು ಚೂಪಾದ ಕೊಳವೆಯಿದೆ. ಇದು ಆಹಾರಪದಾರ್ಥಗಳನ್ನು ಒಳಕ್ಕೆ ಸೆಳೆದುಕೊಳ್ಳಲು ಅನುಕೂಲವಾಗಿದೆ. ಅನ್ನನಾಳ ಸ್ನಾಯುಪುಷ್ಟವಾದ್ದು. ನೀರಿನ ರೂಪದ ಆಹಾರವನ್ನು ಒತ್ತಡದಿಂದ ಮುನ್ನೂಕುವುದಕ್ಕೂ ಸೂಕ್ಷ್ಮವಾದ ಘನ ಪದಾರ್ಥಗಳನ್ನು ನುಂಗುವುದಕ್ಕೂ ಇದು ಸಹಾಯಕವಾಗಿದೆ. ಕರುಳು ನೆಟ್ಟಗೆ ಕೊಳವೆಯಂತಿದೆ. ಇದರ ದಪ್ಪ ಒಂದು ಜೀವಕಣದಷ್ಟು. ಕರುಳಿನ ಹೊರ ಮತ್ತು ಒಳಭಾಗಗಳಲ್ಲಿ ಕೈಟಿನ್ ಹೊದಿಕೆಯುಂಟು. ಜೀರ್ಣನಾಳದ ಕೊನೆಯಭಾಗ (ಹೆಣ್ಣಿನಲ್ಲಿ ಗುದ, ಗಂಡಿನಲ್ಲಿ ಮಲಕೂಪ) ಮೇಲಿಂದ ಕೆಳಕ್ಕೆ ಚಪ್ಪಟೆಯಾದ ಮತ್ತು ಮೊಟಕಾದ ಕೊಳವೆಯಂತಿದ್ದು ಹಿಂದಿನ ತುದಿಯ ಭಾಗದಲ್ಲಿ ಹೊರತೆರೆಯುವುದು. ಕೆಲವು ವೇಳೆ ಗುದಗ್ರಂಥಿಗಳಿರುವುದುಂಟು. ಗಂಡಿನಲ್ಲಿ ಸಾಧಾರಣವಾಗಿ ಎರಡು ಪೀನಿಯಲ್ ಬಿರುಗೂದಲುಗಳು ಮಲಕೂಪ ದ್ವಾರದ ಮೂಲಕ ಹೊರಬರುತ್ತವೆ. ಪುರುಷಾಣುಗಳನ್ನು ಹೆಣ್ಣಿನ ದೇಹದೊಳಗೆ ಸಾಗಿಸಲು ಇವು ಸಹಕರಿಸುತ್ತವೆ. ಆದರೆ ಶಿಶ್ನದ ರೀತಿಯಲ್ಲಿ ಅಲ್ಲ.

	ನೆಮಟೋಡ ಗುಂಪಿನವು ಏಕಲಿಂಗ ಪ್ರಾಣಿಗಳು. ಇವುಗಳ ಜನನೇಂದ್ರಿಯಗಳು ಸಾಧಾರಣವಾಗಿ ಕೊಳವೆಯಂಥ ರಚನೆಗಳು. ಗರ್ಭಕೋಶನಾಳ ಮತ್ತು ಬೀಜಾಶಯನಾಳಗಳು ಒಂದೇ ಒಂದು ಸಾಲು ಜೀವಕಣಗಳಿಂದ ರಚಿತವಾಗಿವೆ. ಈ ನಾಳಗಳು ಜನನೇಂದ್ರಿಯಗಳೊಂದಿಗೆ ಸೇರಿವೆ. ಒಂದು ಜೊತೆ ಅಂಡಾಶಯ ಮತ್ತು ಒಂದು ಬೀಜಾಶಯವಿರುವುದು ಸಾಮಾನ್ಯ. ಕೆಲವಲ್ಲಿ ಅಂಡಾಶಯ ಎರಡಕ್ಕಿಂತ ಹೆಚ್ಚಿರುವುದರಿಂದ ಈ ಅಂಶವನ್ನು ಕೆಲವು ವೇಳೆ ಗುಂಪಿನ ವರ್ಗೀಕರಣಕ್ಕೆ ಬಳಸಿಕೊಳ್ಳಲಾಗುವುದು. ಜನನೇಂದ್ರಿಯಗಳು ಕೆಲವೆಡೆಗಳಲ್ಲಿ ಉಬ್ಬಿ ಪುರುಷಾಣುಗಳನ್ನು ಸಂಗ್ರಹಿಸುವುದಕ್ಕೆ ನೆರವಾಗುವುವು.

	ತತ್ತಿಗಳು ಭ್ರೂಣವಾಗಿ ಹುಳುವಿನಾಕಾರದ ಡಿಂಬಗಳಾಗುವವರೆಗೆ ಬೇಕಾದ ಆಹಾರಸಾಮಗ್ರಿಗಳನ್ನು ಮೊದಲೆ ಒದಗಿಸಿಕೊಳ್ಳುತ್ತವೆ. ತತ್ತಿಗಳ ಜೀವರಸದಲ್ಲಿ ಯಾವ ವಿಧವಾದ ಆಹಾರ ಶೇಖರಣೆಯೂ ಇರುವುದಿಲ್ಲ. ಪುರುಷಾಣುಗಳು ಅಮೀಬ ಆಕಾರದವು. ಕೆಲವು ಕಶದ ರಚನೆಯುಳ್ಳವು. ಕೆಲವು ಬಗೆಯ ಹುಳುಗಳಲ್ಲಿ ಪುರುಷಾಣುಗಳು ಉದ್ದವಾಗಿವೆ. ಹೆಣ್ಣು ಗಂಡುಗಳ ಸಂಭೋಗ ಕಾಲದಲ್ಲಿ ಪುರುಷಾಣುಗಳು ಹೆಣ್ಣಿನ ಜನನೇಂದ್ರಿಯ ನಾಳಗಳನ್ನು ಹೊಕ್ಕು ಗರ್ಭಕೋಶದಲ್ಲಿ ಸಂಚರಿಸಿ ಸ್ವಲ್ಪ ಕಾಲ ಸಂಗ್ರಹಗೊಂಡಿರುವುವು. ನಿಷೇಚಿತ ತತ್ತಿಗಳು ತಮ್ಮ ಸುತ್ತ ಒಂದು ಕವಚವನ್ನು ರಚಿಸಿಕೊಳ್ಳುವುವು. ಅನಂತರ ಈ ಕವಚ ಒಳಭಾಗದಲ್ಲಿ ಇನ್ನೊಂದನ್ನು ಸ್ರವಿಸುತ್ತದೆ. ಹೊರಕವಚದಲ್ಲಿ ವಿವಿಧ ನಮೂನೆಗಳಿವೆ.

	ನರಮಂಡಲ ಭ್ರೂಣದ ಹೊರಚರ್ಮದಿಂದ ರೂಪಿತವಾಗುವಂಥದು. ಗಂಟಲಿನ ಸುತ್ತ ಉಂಗುರಾಕಾರದ ನರಹುರಿಯಿದೆ. ಇದರ ಮುಂಭಾಗದಿಂದ ಆರು ನರಗಳು ಮತ್ತು ಹಿಂಭಾಗದಿಂದ ಆರು ನರಗಳು ಹೊರಡುತ್ತವೆ. ಹಿಂಭಾಗದ ನರಗಳು ಉದ್ದವಾಗಿದ್ದು ಹಿಂದಿನ ತುದಿಯವರೆಗೂ ಚಾಚಿಕೊಂಡಿವೆ. ಈ ನರಗಳ ಪೈಕಿ ಎರಡು ನರಗಳು ದಪ್ಪವಾಗಿದ್ದು ಹೊರದರ್ಮದ ಊಧ್ರ್ವದಿಬ್ಬ ಮತ್ತು ಅಧೋದಿಬ್ಬದಲ್ಲಿ ಅಡಗಿಕೊಂಡಿವೆ. ಇವೆರಡರ ಸಂಬಂಧ ಕಲ್ಪಿಸುವ ಅನೇಕ ನರತಂತುಗಳಿವೆ. ಇವುಗಳ ಶೇಖರಣೆಯಿಂದ ನರಹುರಿ ಉಂಗುರದ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಎರಡು ನರಮುಡಿಗಳು ರೂಪುಗೊಂಡಿವೆ.

    ಇವುಗಳ ಶರೀರ ಶಾಸ್ತ್ರದ ವಿಚಾರವಾಗಿ ಹೆಚ್ಚಿಗೆ ತಿಳಿದುಬಂದಿಲ್ಲ. ರ್ಯಾಬ್ಡೈಟಿಸ್ ಎಂಬುದರ ವಿಷಯವಾಗಿ ಹೆಚ್ಚಿನ ಸಂಶೋಧನೆ ನಡೆದಿದೆ. ಜಂತುಹುಳು ವಿಚಾರವಾಗಿ ಅನೇಕ ಜೀವರಾಸಾಯನಿಕ ಸಂಶೋಧನೆಗಳು ಮುಂದುವರಿಯುತ್ತಿವೆ.

    ದುಂಡುಹುಳುಗಳಿಗೂ ಇತರ ಜೀವಿಗಳ ಗುಂಪುಗಳಿಗೂ ಇರುವ ಸಂಬಂಧ ಮತ್ತು ಅದೇ ವಂಶದಲ್ಲಿನ ಜೀವಗುಂಪುಗಳಿಗೂ ಇರುವ ಸಂಬಂಧ ಚರ್ಚಾಸ್ಪದ ವಿಷಯವಾಗಿದೆ. ಗ್ಯಾಸ್ಟ್ರೊಟ್ರೈಕಗಳಿಗೂ ಇವುಗಳಿಗೂ ಸಂಬಂಧ ಕಲ್ಪಿಸಬಹುದೆಂಬ ಅಭಿಪ್ರಾಯದ ಬಗ್ಗೆ ಮಾತ್ರ ಸಾಮಾನ್ಯ ಒಪ್ಪಿಗೆಯುಂಟು.

	ದುಂಡುಹುಳುಗಳು ತಮ್ಮ ಜೀವನವನ್ನು ಇತರ ಜೀವಿಗಳಿಗಿಂತ ಅತ್ಯುತ್ತಮ ರೀತಿಯಲ್ಲಿ ನಡೆಸುವುವು.

	ಬಹುಪಾಲು ದುಂಡುಹುಳುಗಳು ಸಿಹಿನೀರಿನಲ್ಲಿ, ಸಮುದ್ರದಲ್ಲಿ ಮತ್ತು ಮಣ್ಣಿನಲ್ಲಿ ಜೀವಿಸುತ್ತವೆ. ನೀರಿನಲ್ಲಿ ವಾಸಿಸವುಗಳಿಗೆ ಪಾಚಿ ಮುಖ್ಯ ಆಹಾರ. ಮಣ್ಣಿನಲ್ಲಿ ಜೀವಿಸುವುವು ಕೊಳೆತು ನಾರುವ ಪ್ರಾಣಿ ಹಾಗೂ ಸಸ್ಯಗಳನ್ನು ತಿಂದು ಬದುಕುವುವು. ಮನೋಂಕಸ್ ಜಾತಿಯವು ಮಾಂಸಹಾರಿಗಳು ಇತರ ದುಂಡುಹುಳುಗಳನ್ನು ಮತ್ತು ರೋಟಿಫೆರ್‍ಗಳನ್ನು ತಿನ್ನುತ್ತವೆ. ಆಂಗ್ವಿಲ್ಲ ಅಸಿಟಿ ಎಂಬುದು ಬ್ಯಾಕ್ಟೀರಿಯಗಳನ್ನು ತಿನ್ನುತ್ತದೆ. ಮತ್ತೆ ಕೆಲವು ಬಗೆಯವು ಸಸ್ಯಗಳನ್ನು ಕೊರೆದು ಸಸ್ಯರಸವನ್ನು ಹೀರುವುವು. ಟ್ರೈಲೆಂಕಸ್ ಟ್ರಿಟಿಸಿಯ ಮರಿಗಳು ಗೋದಿಯ ದಂಟನ್ನು ಕೊರೆದು ಒಳಹೊಕ್ಕು ಗಂಟುಗಳನ್ನು (ಗಾಲ್) ಉಂಟುಮಾಡಿ ಅನೇಕ ಕಾಲ ಜೀವಿಸುವುವು. ಗಂಟುಗಳು ಭೂಮಿಗೆ ಬಿದ್ದು ತೇವದ ಸಂಪರ್ಕಕ್ಕೆ ಬಂದು ಮರಿಗಳು ಕೊಳೆತಾಗ ಇತರ ಗೋದಿ ಸಸ್ಯಗಳನ್ನು ಒಳಹೊಕ್ಕು ಜೀವನ ಚರಿತ್ರೆ ಮುಂದುವರಿಸುವುವು.

	ಆಂಗ್ವಿಲ್ಲುಲೈನ ಅಗಸ್ಟ ಎಂಬುದು ನೆಲವಾಸಿ. ಹಾಗೂ ಬತ್ತದ ಪೈರಿನಲ್ಲಿ ಗಂಟುಗಳನ್ನುಂಟುಮಾಡುವುವು. ಸ್ಪಿರುಲೇರಿಯ ಬಾಂಬೈ ಎಂಬುದರ ಹೆಣ್ಣು ದುಂಡು ಹುಳು ಜೇನುನೊಣದ ದೇಹಾಂತರಾವಕಾಶದಲ್ಲಿ ಜೀವಿಸುವುವು. ಮನುಷ್ಯನಲ್ಲೂ ಅನೇಕ ತೆರನ ದುಂಡುಹುಳುಗಳು ಪರೋಪಜೀವನ ನಡೆಸುವುವು.

	ನೆಮಟೋಡ ಗುಂಪಿನಲ್ಲಿ ಏಳು ಕುಟುಂಬಗಳಿವೆ. ಕುಟುಂಬ 1. ಆಸ್ಕಾರಿಡೀ: ಉದಾ: ಮನುಷ್ಯನ ಪರೋಪಜೀವಿಯಾದ ಆಸ್ಕಾರಿಸ್ ಮತ್ತು ಸೂಜಿಹುಳುವಾದ ಎಟಿರೋಬಿಯಸ್ ವರ್ಮಿಕುಲ್ಯಾರಿಸ್.

	ಕುಟುಂಬ 2. ಸ್ಟ್ರಾಂಗೈಲಿಡೀ: ಉದಾ: ಕೋಳಿಗಳ ಗಂಟಲುನಾಳಗಳಲ್ಲಿ ವಾಸಿಸುವ ಸಿಂಗೇಮಸ್ ಟ್ರೇಕಿಯ ಹಂದಿಗಳ ಮತ್ತು ದನಕರುಗಳ ಕರುಳಿನಲ್ಲಿರುವ ಇಸೊಫೇಗೊಸ್ಟೋಮಮ್. ಕುದುರೆಯಲ್ಲಿ ಜೀವಿಸುವ ಸ್ಟ್ರಾಂಗೈಲಸ್, ಮನುಷ್ಯನ ಕರುಳಿನಲ್ಲಿ ವಾಸಿಸುವ ಕೊಕ್ಕೆಹುಳು (ಆಂಕೈಲೊಸ್ಟೋಮ ಡುಯೊಡಿನೇಲ್) ಮತ್ತು ನಿಕೆಟರ್ ಅಮೆರಿಕಾನಸ್.

	ಕುಟುಂಬ 3. ಟ್ರೈಕೊಟ್ರಾಕೆಲಿಡೀ: ಉದಾ: ಚಾಟಿಹುಳುವಾದ ಟ್ರೈಕೊಕಿಫಾಲಸ್ ಟ್ರೈಕೊರಿಸ್ (ಮನುಷ್ಯನ ದೊಡ್ಡ ಕರುಳಿನ ಪರೋಪಜೀವಿ), ಇಲಿಗಳ ಕರುಳಿನಲ್ಲಿ ಜೀವಿಸುವ ಟ್ರೈಕಿನೆಲ್ಲ ಸ್ಟೈರಾಲಿಸ್ ಹುಳು. ಇದು ಹಂದಿ ಮತ್ತು ಮನುಷ್ಯನ ಪರೋಪಜೀವಿಯೂ ಹೌದು.

	ಕುಟುಂ¨ 4. ಫೈಲೇರಿಯೈಡೀ: ಇವು ಕಶೇರುಕಗಳ ಕಣಧಾತುಗಳ ಪರೋಪಜೀವಿಗಳು. ಉದಾಹರಣೆ: ವುಚೆರೆರಿಯ ಬಾನ್‍ಕ್ರಾಫ್ಟಿ ಅಥವಾ ಗಿನಿಹುಳು.

	ಕುಟುಂಬ 5. ಮೆರ್ನಿತಿಡೀ: ಉದಾಹರಣೆ: ಮೆರ್ಮಿಸ್. ಇದರ ಪ್ರೌಢಜೀವಿಗಳು ಕಂಬಳಿಹುಳುಗಳ ಅಥವಾ ಮಿಡತೆಗಳಲ್ಲಿ ಪರೋಪಜೀವನ ನಡೆಸುವುವು. ಸ್ಫೆರುಲೇರಿಯಾ ಬಾಂಬೈ ಜೇನುನೊಣಗಳ ಪರೋಪಜೀವಿ.

	ಕುಟುಂಬ 6. ಆಂಗ್ವಿಲ್ಲೊಲಿಡೀ: ಇವು ಸಣ್ಣ ಹುಳುಗಳು; ಪರೋಪಜೀವಿಗಳಲ್ಲ. ರ್ಯಾಬ್ಡೈಟಿಸ್, ಟೈಲೆಂಕಸ್ ಮತ್ತು ಆಂಗ್ವಿಲುಲ ಉದಾಹರಣೆಗಳು.

	ಕುಟುಂಬ 7. ಇನೋಪ್ಲಿಡೀ: ಸಾಮಾನ್ಯವಾಗಿ ಸಮುದ್ರವಾಸಿಗಳು ಉದಾಹರಣೆ: ಇನೋಪ್ಲಸ್.
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ